ಬ್ಯಾಂಕಿನ ಪ್ರಗತಿಯ ನೋಟ

ಈಗೆ ಸುಮಾರು 43 ವರ್ಷಗಳ ಹಿಂದೆ ಅಂದರೆ 1972ನೇ ಇಸವಿ ಮಧ್ಯಭಾಗದಲ್ಲಿ ರಾಜಾಜಿನಗರದ ಕೆಲವು ಗಣ್ಯ ವ್ಯಕ್ತಿಗಳು ಒಂದು ಕಡೆ ಸೇರಿ ಈ ಭಾಗದ ದುರ್ಬಲ ವರ್ಗದವರು, ಹಿಂದುಳಿದ ವರ್ಗದವರು, ಮಧ್ಯಮ ವರ್ಗದವರು ಇವರುಗಳಿಗೆ ಸಾಲ ಸೌಲಭ್ಯವನ್ನು ಒದಗಿಸಿಕೊಟ್ಟು ಜೀವನ ಮಟ್ಟವನ್ನು ಉತ್ತಮಪಡಿಸಲು ಅನುಕೂಲವಾಗುವಂತೆ ಒಂದು ಸಹಕಾರಿ ಬ್ಯಾಂಕನ್ನು ತೆರೆಯಲು ಕ್ರಮ ತೆಗೆದುಕೊಳ್ಳುವಂತೆ ಅಭಿಪ್ರಾಯಪಟ್ಟು, ಇದರ ಬಗ್ಗೆ 23 ಜನ ಪ್ರವರ್ತಕರು ಒಬ್ಬ ಮುಖ್ಯ ಪ್ರವರ್ತಕರು ಉಳ್ಳ ಸಂಘವನ್ನು ರಚಿಸಲಾಯ್ತು. ಈ ಸಂಘದವರು ಮುಂದಿನ ಕಾರ್ಯ ಕಲಾಪಗಳನ್ನು ನಡೆಸಲು ಇದೇ ರಾಜಾಜಿನಗರದ 1ನೇ 'ಎನ್ ' ಬ್ಲಾಕಿನಲ್ಲಿ ಕೇವಲ ರೂ.50.00ಗಳ ಬಾಡಿಗೆಗೆ ಒಂದು ಕಾರ್ ಷೆಡ್ನ್ನು ಪಡೆದರು. ಅತಿ ಶೀಘ್ರದಲ್ಲಿಯೇ ರಚನೆಗೊಂಡ ಕಾರ್ಯ ನಿರ್ವಹಕ ನಿರ್ದೇಶಕರು ಪ್ರವರ್ತಕರ ಮಂಡಳಿ ಸಭೆಯನ್ನು ಮುಖ್ಯ ಪ್ರವರ್ತಕರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಇದರಲ್ಲಿ ಆಗ ಸ್ಥಾಪಿಸಬೇಕೆಂದಿರುವ ಬ್ಯಾಂಕಿಗೆ 'ದಿ ಸಿಟಿಜನ್ ಕೋ-ಆಪರೇಟಿವ್ ಬ್ಯಾಂಕ್' ಎಂಬ ಹೆಸರಿಡಬೇಕೆಂತಲೂ, ಸದಸ್ಯರನ್ನು ಸೇರಿಸಿಕೊಂಡು ಷೇರು ಹಣವನ್ನು ಷೇರಿಗೆ ರೂ,100.00 ಗಳು ಎಂದು ನಿಗದಿ ಮಾಡುವಂತೆಯೂ, ಹೀಗೆ ಷೇರು ಸಂಗ್ರಹಿಸುವುದಕ್ಕೆ ಬೆಂಗಳೂರು ವಿಭಾಗದ ಸಂಯುಕ್ತ ನಿಬಂಧಕರನ್ನು ಕಂಡು ಅನುಮತಿ ಪಡೆಯಬೇಕೆಂತಲೂ ತೀರ್ಮಾನಿಸಲಾಯಿತು. ಇದರಂತೆ ಸಂಯುಕ್ತ ನಿಬಂಧಕರಿಂದ ಅನುಮತಿ ಪಡೆದು ಷೇರು ಸಂಗ್ರಹಣೆ ಪ್ರಾರಂಬಿಸಲಾಯ್ತು. ಆಗಿನ ಕಾಲದಲ್ಲಿ ಆಧಿಕ ದುಸ್ಥಿತಿಯಿಂದ ಷೇರು ಹಣ ರೂ.100.00 ಗಳನ್ನು ಒಂದೇ ಕಂತಿನಲ್ಲಿ ಕಟ್ಟಲು ಜನರಿಗೆ ಶಕ್ತಿಯಿಲ್ಲದ ಪ್ರಯುಕ್ತ ಷೇರು ಹಣ ರೂ.25.00 ರಂತೆ 4 ಸಮ ಕಂತುಗಳಲ್ಲಿ ಪಾವತಿಸಲು ತೀರ್ಮಾನಿಸಲಾಯಿತು.

ಈ ಬ್ಯಾಂಕಿನ ಸ್ಥಾಪನೆ ವಿಷಯವನ್ನು ಕರಪತ್ರಗಳ ಮೂಲಕ ಪ್ರಚಾರ ಪಡಿಸಿದ್ದು, ಷೇರು ಪಡೆಯಲು ನೂಕು ನುಗ್ಗಲಿನಿಂದ ಜನರು ಬರಲು ಪ್ರಾರಂಭವಾದರೂ ಸಂಗ್ರಹಿಸಬೇಕಾದ ಷೇರಿನ ಗುರಿ ಕೇವಲ ಒಂದು ಲಕ್ಷ ರೂ.ಗಳು ತಲುಪಲು ಒಂದು ಹಂತ ದಲ್ಲಿ ರೂ.5,000-00 ಗಳು ಕೊರತೆಯಿತ್ತು. ಆಗ ಈ ಬ್ಯಾಂಕಿನ ಪ್ರವರ್ತಕರು ಹಾಗೂ ಶಿಕ್ಷಣ ಇಲಾಖೆಯಲ್ಲಿ ಜಂಟಿ ಡ್ಯೆರೆಕ್ಟರಾಗಿ ಸೇವೆ ಸಲ್ಲಿಸುತ್ತಿದ್ದವರೂ ಹಾಗೂ ಮುಂದೆ ಈ ಬ್ಯಾಂಕಿನ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸದವರು ಆದ ಶ್ರೀಮಾನ್ ಜೆ.ಎಂ.ಟಿ.ರಾಜನ್ರವರನ್ನು ಈ ಕೊರತೆಯ ರೂ.5,000-00 ತುಂಬಿಕೊಡಲು ಸಹಾಯ ಮಾಡುವಂತೆ ಕೇಳಿಕೊಂಡಾಗ ಸಂತೋಷದಿಂದ ಅವರು ತಮ್ಮ ಸಹೋದ್ಯೋಗಿಗಳ ನೆರವಿನಿಂದ ಒಬ್ಬೊಬ್ಬರಿಂದ ರೂ.500-00 ರಂತೆ ಷೇರು ಹಣವನ್ನು 10 ಜನರಿಂದ ರೂ.5,000-00ಗಳನ್ನು ಸಂಗ್ರಹಿಸಿ ಕೊಟ್ಟಿದ್ದರಿಂದ ನಿಗಧಿಯಾಗಿದ್ದ ಒಂದು ಲಕ್ಷ ಷೇರು ಹಣದ ಗುರಿ ಮುಟ್ಟಲು ಸಾಧ್ಯವಾಯಿತು. ಇವರು ಮಾಡಿದ ಸಹಾಯವನ್ನು ಅಭಿನಂದನಾಪೂರ್ವಕವಾಗಿ ಈ ಸಂದರ್ಭದಲ್ಲಿ ನೆನಪಿಸಿ ಕೊಳ್ಳುತ್ತೇವೆ.

ಹೀಗೆ ಬ್ಯಾಂಕು ಸ್ಥಾಪನೆಯಾಗಲು ಮುಟ್ಟಬೇಕಾದ ಗುರಿ ಒಂದು ಲಕ್ಷ ರೂಪಾಯಿಗಳು ತಲುಪಿದ ಕೂಡಲೇ ಸರ್ವಸದಸ್ಯರ ಸಭೆಯನ್ನು ಕರೆದು ಬೈಲಾಗಳನ್ನು ಅಳವಡಿಸಿಕೊಂಡು ಬ್ಯಾಂಕು ರಿಜಿಸ್ಟರಾಗಲು ಬೆಂಗಳೂರು ವಿಭಾಗದ ಸಂಯುಕ್ತಕರಿಂದ ರಿಜಿಸ್ಟೇಷನ್ ಪಡೆಯಲಾಯಿತು ಮತ್ತು ಕಾರ್ಯಕಾರಿ ಸಮಿತಿಗೆ ಪ್ರಾರಂಭದಲ್ಲಿ 15 ಜನರುಳ್ಳ ನಿರ್ದೇಶಕರನ್ನು ಬೆಂಗಳೂರು ವಿಭಾಗದ ಸಂಯುಕ್ತ ನಿಬಂಧಕರು ನಾಮಕರಣ ಮಾಡಿದರು. ಹೀಗೆ ನಾಮಕರಣಗೊಂಡ ನಿರ್ದೇಶಕರು ಸಭೆ ಸೇರಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಮುಂಬಯಿ ಇವರಿಂದ ಲೈಸೆನ್ಸ್ ಪಡೆಯಲು ತೀರ್ಮಾನಿ ಮನವಿ ಪತ್ರವನ್ನು ಕಳುಹಿಸಲಾಯಿತು. ನಂತರ ಈ ಬ್ಯಾಂಕಿನ 4 ಜನ ನಿರ್ದೇಶಕರು ಮುಂಬಯಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳನ್ನು ಸಂಪರ್ಕಿಸಿ ಖುದ್ದು ಲೈಸೆನ್ಸ್ ಪಡೆಯಲಾಯಿತು. ನಂತರ ಬ್ಯಾಂಕಿನ ಪ್ರಾರಂಭೋತ್ಸವವನ್ನು ನಡೆಸಲು ಆಗಿನ ಕರ್ನಾಟಕ ಸರ್ಕಾರದ ಸಹಕಾರ ಇಲಾಖಾ, ಸಹಕಾರ ಸಚಿವರಾಗಿದ್ದ ಶ್ರೀ ಸಿ.ಎ.ಎನ್ ಪಾಟೀಲರನ್ನು ಪ್ರಥೀಸಿಕೊಂಡ ಮೇಲೆ ಇಲ್ಲಿ ದಯಮಾಡಿಸಿ ಪ್ರಾರಂಭೋತ್ಸವ ನಡೆಸಿಕೊಡುವುದಾಗಿ ಭರವಸೆ ನೀಡಿದರು.ಇದರಂತೆ ತಾರೀಖು 17.03.1974 ರಲ್ಲಿ ಬಾಡಿಗೆಗೆ ಪಡೆದಿದ್ದ ಕಟ್ಟಡದ ಪ್ರಾರಂಭೋತ್ಸವವನ್ನು ನೆರವೇರಿಸಿ ಕೊಟ್ಟರು. ಇವರನ್ನು ಈ ದಿನ ನೆನಪಿಸಿಕೊಂಡು ಇವರಿಗೆ ತಮ್ಮ ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸುತ್ತೇವೆ, ಹೀಗೆ ಬ್ಯಾಂಕಿನ ಪ್ರಾರಂಭೋತ್ಸವ ನಡೆದ ಕೂಡಲೇ ಕಾರ್ಯಕಲಾಪಗಳನ್ನು ನಡೆಸಲು ಒಂದು ಅನುಕೂಲವಾದ ಕಟ್ಟಡ ಬೇಕಾದ್ದುದರಿಂದ ಕಾರುಷೆಡ್ಡಿನ ಹತ್ತಿರ 40ಥ60 ಅಡಿ ವಿಸ್ತೀರ್ಣದ ಒಂದು ಕಟ್ಟಡವನ್ನು ತಿಂಗಳೊಂದಕ್ಕೆ ರೂ.500-00 ಬಾಡಿಗೆಗೆ ಪಡೆದು ಇದರಲ್ಲಿ ಬ್ಯಾಂಕಿನ ಕಾರ್ಯಕಲಾಪಗಳನ್ನು ನಡೆಸಲು ಏರ್ಪಾಡು ಮಾಡಲಾಯಿತು.

ಮೇಲ್ಕಂಡಂತೆ ನಾಮಕರಣಗೊಂಡ ಕಾರ್ಯಕಾರಿ ಸಮಿತಿಯ ಸದಸ್ಯರ ಅವಧಿಯು 1976ನೇ ಸೆಪ್ಟೆಂಬರ್ ನಲ್ಲಿ ಮುಗಿದು ಚುನಾವಣೆ ಮೂಲಕ ಹೊಸ ಕಾರ್ಯಕಾರಿ ಸಮಿತಿ ರಚಿತವಾಗಿ ಅಲ್ಲಿಂದೀಚೆಗೆ ಚುನಾಯಿತ ಕಾರ್ಯಕಾರಿ ಮಂಡಳಿಯಿಂದ ಬ್ಯಾಂಕಿನ ವ್ಯವಹಾರಗಳು ನಡೆಯುತ್ತಿರುತ್ತದೆ. ಹೀಗೆ ನಡೆದ ಚುನಾವಣೆಯಲ್ಲಿ ಈ ಬ್ಯಾಂಕಿನ ಅಧ್ಯಕ್ಷರಾಗಿ ಶ್ರೀ ಕೆ.ಬಿ.ವೆಂಕಟೇಶ್ರವರು ಸ್ಪರ್ದಿಸಿ ಜಯಶೀಲರಾಗಿರುತ್ತಾರೆ. ಬ್ಯಾಂಕ್ ಪ್ರಾರಂಭದಿಂದಲೂ ಬಾಡಿಗೆ ಕಟ್ಟಡದಲ್ಲಿ ವ್ಯವಹಾರ ನಡೆಸುತ್ತಿದ್ದು ಒಂದು ತಮ್ಮದೇ ಆದ ಸ್ವಂತ ಕಟ್ಟಡ ಹೊಂದಬೇಕೇಂಬ ಅಭಿಪ್ರಾಯದಿಂದ ತಾರೀಖು 19.12.1987ರಲ್ಲಿ ರಾಜಾಜಿನಗರ, ಡಾ. ರಾಜ್ಕುಮಾರ್ ರಸ್ತೆಗೆ ಲಗತ್ತಿಸಿರುವ 2ನೇ ಹಂತದ ನಂ.651/ಎ: 16ನೇ ನಂಬರ್ ಹಳೇ ಕಟ್ಟಡವನ್ನು ಕೊಳ್ಳಲು ಸಹಕಾರ ಸಂಘಗಳ ನಿಬಂಧಕರಿಂದ ಅನುಮತಿ ಪಡೆದು ತಾರೀಖು 05.02.1988ರಲ್ಲಿ ಈ ಸ್ವತ್ತಿನ ಮಾಲೀಕರಾದ ಶ್ರೀಮತಿ ನೀಲಾಂಬರರವರಿಂದ ರೂ.3,65,000-00 ಕ್ರಯ ನಿಷ್ಕರ್ಷಯಾಗಿ ಬ್ಯಾಂಕಿನ ಹೆಸರಿಗೆ ರಿಜಿಸ್ಟರ್ ಮಾಡಿಕೊಳ್ಳಲಾಯಿತು ಮತ್ತು ಹೊಸ ಕಟ್ಟಡ ಕಟ್ಟಲು ನಕ್ಷೆಯನ್ನು ತಯಾರಿಸಿ ಮಹಾನಗರ ಪಾಲಿಕೆಯಿಂದ ಮಂಜೂರಾತಿ ಪಡೆಯಲಾಯಿತು. ಹಳೇ ಕಟ್ಟಡವನ್ನು ಕೆಡವಿ ಹಾಕಿದ ನಂತರ ಈ ಕಟ್ಟಡದ ಶಿಲಾನ್ಯಾಸವನ್ನು ಕರ್ನಾಟಕ ಸರಕಾರ ಸಚಿವರಾದ ಸನ್ಮಾನ್ಯ ಶ್ರೀ ಎಸ್.ಎಸ್.ಪಾಟೀಲವರರಿಂದ ತಾರೀಖು 07.09.1995 ರಂದು ನೆರವೇರಿಸಲಾಯಿತು. ಈಗ ಕಟ್ಟಲಾಗಿರುವ ಹೊಸ ಕಟ್ಟಡವು ಭದ್ರತಾ ಕೊಠಡಿ, ಸೇಫ್ ಲಾಕರ್ಸ್, ಕೌಂಟರ್ ಬೋರ್ಡ್ ರೂಂಗಳು ಒಳಗೊಂಡಂತೆ ಇತರೆ ಅವಶ್ಯಕವಾದ ಎಲ್ಲಾ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತವಾಗಿ ಕಟ್ಟಡವನ್ನು ನಿರ್ಮಿಸಲಾಗಿದೆ. ಹಾಗೂ ಈ ಕಟ್ಟಡವನ್ನು ನಮ್ಮ ಬ್ಯಾಂಕಿನ ಸ್ವಂತ ಹಣದಿಂದ ಕಟ್ಟಲಾಗಿದೆ. ಇದಕ್ಕೆ 35ಲಕ್ಷ ರೂಪಾಯಿಗಳು ಖರ್ಚು ಆಗಿದೆ.

ಈ ಬ್ಯಾಂಕಿನ ಅಧ್ಯಕ್ಷರಾಗಿದ್ದ ಸನ್ಮಾನ್ಯ ಶ್ರಿ ಕೆ.ಬಿ..ವೆಂಕಟೇಶ್ರವರ ಅಧ್ಯಕ್ಷತೆಯಲ್ಲಿ ಈ ಬ್ಯಾಂಕಿನ ನೂತನ ಕಟ್ಟಡವನ್ನು ಸಹಕಾರಿ ಸಚಿವರಾದ ಸನ್ಮಾನ್ಯ ಶ್ರೀ ಎಸ್.ಎಸ್.ಪಾಟೀಲ್ರವರು ದಿನಾಂಕ 07.02.1999 ರಲ್ಲಿ ಉದ್ಘಾಟನೆ ಮಾಡಿದರು.