1969-70ನೇ ಸಾಲಿನಿಂದ ರಾಜಾಜಿನಗರದ 1ನೇ ಬ್ಲಾಕ್ ನಿವಾಸಿಗಳು ಶ್ರೀ ಶ್ರೀರಾಮನವಮಿ ಉತ್ಸವವನ್ನು ಆಚರಿಸಲು ಪ್ರಾರಂಭಿಸಿದರು. ಈ ಉತ್ಸವ ಸಮಿತಿಯಲ್ಲಿ ಒಂದುಗೂಡಿದ ಹಿರಿಯರ ಗುಂಪು ಕ್ರಮೇಣ 1972ರಲ್ಲಿಯ ಆದಿಯಲ್ಲಿ ಶ್ರೀ ಶ್ರೀರಾಮನವಮಿಗೆಂದು ಒಟ್ಟಿಗೆ ಸೇರಿದಾಗ ಕೆಲವರ ಮನಸ್ಸಿನಲ್ಲಿ ಈ ನಮ್ಮ ಬಡಾವಣೆ ದುರ್ಬಲ ಹಾಗೂ ಮಧ್ಯಮ ವರ್ಗದ ಜನರಿಂದ ಕೂಡಿದ್ದಾಗಿರುತ್ತದೆ. ಆದ್ದರಿಂದ ಈ ಬಡಾವಣೆಗೆ ಒಂದು ಸಹಕಾರ ಬ್ಯಾಂಕಿನ ಅವಶ್ಯಕತೆ ಇದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನಂತರ ಈ ಹಿರಿಯರ ವಿಚಾರವಾದ ಸಹಕಾರ ಬ್ಯಾಂಕ್ ಪ್ರಾರಂಭಿಸುವ ವಿಚಾರದ ಚಿಂತನೆ ಮಂಥನವು 1972ರ ಸಾಲಿನ ಶ್ರೀರಾಮ ನವಮಿಯಂದು ಸಂಕಲ್ಪದ ರೂಪತಾಳಿ ಸಹಕಾರ ಬ್ಯಾಂಕ್ ಪ್ರಾರಂಭಿಸುವ ನಿರ್ಣಯವನ್ನು ಶ್ರೀರಾಮನ ಸನ್ನಿಧಾನದಲ್ಲಿ ಅಂಗೀಕರಿಸಲಾಯಿತು.
ಈ ನಿರ್ಣಯವು ಕಾರ್ಯರೂಪಕ್ಕೆ ಬರಲು ಮತ್ತೆ ಮೂರು ತಿಂಗಳ ಅವಧಿ ಬೇಕಾಯಿತು. ಈ ಅವಧಿಯಲ್ಲಿ ಎಲ್ಲ ಹಿರಿಯರು ಸೇರಿ ಸಹಕಾರ ಇಲಾಖೆಯ ಜಂಟಿ ನಿರ್ದೇಶಕರನ್ನು ಕಂಡು ರಾಜಾಜಿನಗರ ಬಡಾವಣೆಯಲ್ಲಿಯ ನಾಗರೀಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಒಂದು ಸಹಕಾರ ಬ್ಯಾಂಕ್ ಪ್ರಾರಂಭಿಸಲು ನಾವೆಲ್ಲರೂ ಕಾತುರರಾಗಿ ದ್ದೇವೆ ಈ ಕಾರ್ಯದ ಯಶಸ್ಸಿಗೆ ತಮ್ಮಿಂದ ಮಾರ್ಗದರ್ಶನ ಬೇಕೆಂದು ವಿನಂತಿಸಿದರು. ಈ ವಿಷಯ ತಿಳಿದ ಅಧಿಕಾರಿಗಳು ಸಂತೋಷದಿಂದ ನಮ್ಮ ಪ್ರವರ್ತಕರಿಗೆ ಸೂಕ್ತವಾಗಿ ಸರಿಯಾದ ಮಾರ್ಗದರ್ಶನ ನೀಡಿದರು.
ಸಹಕಾರ ಸಂಘದ ಜಂಟಿ ನಿರ್ದೇಶಕರ ನಿರ್ದೇಶನದಂತೆ ಸಭೆ ಸೇರಿ, ಪ್ರವರ್ತಕರನ್ನು ಹಾಗೂ ಅವರಲ್ಲಿ ಒಬ್ಬರನ್ನು ಮುಖ್ಯ ಪ್ರವರ್ತಕರನ್ನಾಗಿಯೂ ನಾಮಕರಣ ಮಾಡಲಾಯಿತು. ಮತ್ತು ಬ್ಯಾಂಕಿನ ವ್ಯವಹಾರ ಪ್ರಾರಂಭಿಸಲು ಈ ಸಂಘಕ್ಕೆ ನಾಮಕರಣವು ಸಹ ಅಷ್ಟೇ ಮುಖ್ಯವಾಗಿದ್ದರಿಂದ ಸಭೆಯಲ್ಲಿ ಈ ಸಂಘಕ್ಕೆ ದಿ ಸಿಟಿಜನ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಎಂದು ನಾಮಕರಣ ಮಾಡಲೂ ಸಹ ತೀರ್ಮಾನಿಸಲಾಯಿತು.
ಈ ಬ್ಯಾಂಕಿನ ನಾಮಕರಣ ಹಾಗೂ ಪ್ರವರ್ತಕರುಗಳ ಪಟ್ಟಿಯೊಂದಿಗೆ ಸಹಕಾರ ಇಲಾಖೆಯಿಂದ ಷೇರು ಹಣ ಸಂಗ್ರಹಿಸಲು ಪರವಾನಿಗೆಯನ್ನು ಪಡೆಯಲಾಯಿತು.
ನಂತರ ಪ್ರವರ್ತಕರ ಸಭೆಯಲ್ಲಿ ಪ್ರತಿ ಷೇರು ಒಂದರ ಮೊತ್ತ 100/- ಗಳೆಂದು ತೀರ್ಮಾನಿಸಲಾಯಿತು. ಆರ್ಬಿಐ ನ ನಿರ್ದೇಶನದಂತೆ ಬ್ಯಾಂಕ್ ಪ್ರಾರಂಭಿಸಲು 1,00,000/- ರೂ. ಮೊತ್ತದ ಷೇರು ಹಣ ಸಂಗ್ರಹವಾಗಬೇಕಿತ್ತು. ಆಂದಿನ ಕಷ್ಟದ ದಿನಗಳಲ್ಲಿ ಈ ಕೆಲಸ ಎಂಥದ್ದಾಗಿತ್ತೆಂದರೆ 'ಜೇನು ನೊಣವು ಹೂವುಗಳಿಂದ ಮಕರಂದವನ್ನು ಹೀರಿ, ಗೂಡುಕಟ್ಟಿ ಗೂಡಿನಲ್ಲಿ ಮಕರಂದ ಸಂಗ್ರಹಿಸಲು ಪಡುವ ಕಷ್ಟದ ಕೆಲಸದಂತೆ ಇತ್ತು' ಈ ರೀತಿಯಾಗಿ ಸಂಗ್ರಹಿಸಿದ ಮಕರಂದವು ನಮಗೆ ಇಂದು ಜೇನು ತುಪ್ಪವಾಗಿ ದೊರೆತಿರುತ್ತದೆ.
ಈ ಕಾರ್ಯ ಸಾಧನೆಯಲ್ಲಿ ತೆರೆಯ ಮೇಲೆ ಹಾಗು ತೆರೆಯ ಮರೆಯಲ್ಲಿ ಹಲವಾರು ಹೃದಯಗಳು ಕೈಗಳು ಒಂದುಗೂಡಿ ಕೆಲಸ ಮಾಡಿದೆ. ಅವರೆಲ್ಲರನ್ನು ಈ ಸಂದರ್ಭದಲ್ಲಿ ಸ್ಮರಿಸದಿದ್ದರೆ ತಪ್ಪಾಗುತ್ತದೆ.
ಪ್ರಾರಂಭದಲ್ಲಿ ಷೇರು ಮೊಬಲಗನ್ನು ಸಂಗ್ರಹಿಸುವಾಗ ಪ್ರವರ್ತಕರುಗಳು ಬಡಾವಣೆಯ ಸ್ನೇಹಿತರು ಮನೆ ಮನೆಗೆ ಹೋಗಿ ಸಹಕಾರ ಸಂಘ ಪ್ರಾರಂಭಿಸಲು ಉದ್ದೇಶ ಹಾಗೂ ಅನುಕೂಲತೆಗಳನ್ನು ವಿವರಿಸಿ ಸದಸ್ಯರಿಂದ ಷೇರು ಮೊಬಲಗನ್ನು ಕಂತುಗಳ ಮುಖಾಂತರ ಸಂಗ್ರಹಿಸಲು ಪ್ರಾರಂಭಿಸಲಾಯಿತು.